ಮಡಿಕೇರಿ, ಜು. 18: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಸಚಿವ ಜಾರ್ಜ್ ಸೇರಿದಂತೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ ಕಾರಣಕ್ಕೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಮಡಿಕೇರಿಯ ಜ. ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಹಿಂದೂ ಪರ ಸಂಘಟನೆಗಳ ಮುಖಂಡರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಪ್ರಸನ್ನಭಟ್, ಕವನ್, ಕಾವೇರಪ್ಪ, ಅರುಣ್‍ಶೆಟ್ಟಿ, ಬಿ.ಎಂ. ಮೇದಪ್ಪ, ಮನು ಮಂಜುನಾಥ್, ಶಿವಕುಮಾರಿ ಇನ್ನಿತರರಿದ್ದರು.

ಸೋಮವಾರಪೇಟೆ

ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾಂಗ್ರೆಸ್‍ನ ದುರಾಡಳಿತದ ವಿರುದ್ಧ ನ್ಯಾಯಾಲಯ ಚಾಟಿ ಏಟು ಬೀಸಿದೆ. ಕೆ.ಜೆ. ಜಾರ್ಜ್ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ತಾಲೂಕು ಕಾರ್ಯದರ್ಶಿ ಮನು ರೈ ಆಗ್ರಹಿಸಿದರು. ಈ ಸಂದರ್ಭ ನಗರಾಧ್ಯಕ್ಷ ಸೋಮೇಶ್, ಜಿ.ಪಂ. ಸದಸ್ಯ ದೀಪಕ್, ಕೋಮಾರಿ ಸತೀಶ್, ಕಿಬ್ಬೆಟ್ಟ ಮಧು, ಪ್ರವೀಣ್, ಮಿಲನ್ ಇನ್ನಿತರರು ಪಾಲ್ಗೊಂಡಿದ್ದರು.