ಮಡಿಕೇರಿ, ಸೆ. 10: ಬ್ರಿಟೀಷರ ಆಡಳಿತ ಆರಂಭಗೊಂಡ 1834 ರಿಂದ ಸ್ವಾತಂತ್ರ್ಯ ದೊರೆತ 1947ರವರೆಗೆ ಕೊಡಗಿನಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾದ ಮಹತ್ತರವಾದ ಬದಲಾವಣೆಗಳು ಸಾಧ್ಯವಾಗಿರಲಿಲ್ಲ. 1980ರ ಬಳಿಕ ಜಿಲ್ಲೆ ಸಾಕಷ್ಟು ಬದಲಾವಣೆÉಗಳಿಗೆ ತನ್ನನ್ನು ತೆರೆದುಕೊಂಡಿತು. 1990ರ ದಶಕದ ಜಿಲ್ಲೆಯ ಕಾಫಿ ಉದ್ಯಮ ಎಫ್‍ಎಸ್‍ಕ್ಯೂ ಇಲ್ಲವೆ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡುದು ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಮಹತ್ವದ ತಿರುವೆಂದು ಪ್ರೊ| ಕೋಡೀರ ಲೋಕೇಶ್ ಅನಿಸಿಕೆ ವ್ಯಕ್ತಪಡಿಸಿದರು.

ನಗರದ ಕೊಡವ ಸಮಾಜದ ಸಭಾಂಗÀಣದಲ್ಲಿ ನಡೆದ ಕೊಡವ ವಿದ್ಯಾನಿಧಿಯ 100ನೇ ವಾರ್ಷಿಕ ಮಹಾಸಭೆಯ ಬಳಿಕ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ ದರು. ಬ್ರಿಟೀಷರ ಆಳ್ವಿಕೆಯಲ್ಲಿ ಕಾಣದ ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆ ಸ್ವಾತಂತ್ರ್ಯಾನಂತರದ ಅವಧಿಯ ಬಳಿಕ ಕೊಡಗಿನಲ್ಲಿ ಗುರುತಿಸಬಹುದೆಂದು ಅಭಿಪ್ರಾಯಪಟ್ಟರು.

ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇದಕ್ಕೆ ವಿಫುಲ ಅವಕಾಶಗಳಿವೆ. ಇಂತಹ ಅವಕಾಶಗಳನ್ನು ಸ್ಥಳೀಯರು ಬಳಸಿಕೊಂಡು ಆರ್ಥಿಕ ಪ್ರಗತಿಯನ್ನು ಕಂಡುಕೊಳ್ಳುವಂತಾಗಬೇಕು. ಕೊಡಗಿನಲ್ಲಿ ‘ಪರಿಸರ’ ಮತ್ತು ‘ಅಭಿವೃದ್ಧಿ’ಯನ್ನು ಹೇಗೆ ಸರಿದೂಗಿಸಿಕೊಂಡು ಹೋಗಬೇಕೆನ್ನು ವದು ಅತ್ಯಂತ ಪ್ರಮುಖವಾಗಿದ್ದು, ಈ ಬಗ್ಗೆ ಸಾಕಷ್ಟು ಚಿಂತನೆಗಳ ಅಗತ್ಯವಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಕೊಡಗು ರಾಜ್ಯದಲ್ಲೇ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಗುರುತಿಸಿಕೊಳ್ಳುವದರ ನಡುವೆಯೂ ಇಲ್ಲಿನ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಮತ್ತಷ್ಟು ಅಭಿವೃದ್ಧಿಯನ್ನು ಕಾಣುವ ಅಗತ್ಯವಿದೆ. ಜಿಲ್ಲೆಯ ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳು ಇಲ್ಲದಿರುವದು ಒಂದೆಡೆಯಾದರೆ, ಮತ್ತೊಂದೆಡೆ ಶೈಕ್ಷಣಿಕ ಬೆಳವಣಿಗೆಯನ್ನು ಕಂಡುಕೊಳ್ಳುವ ಮೂಲಕ ಸತ್ಪ್ರಜೆಗಳನ್ನು ರೂಪಿಸುವ ಪ್ರಯತ್ನಗಳು ಶಿಕ್ಷಕ ಸಮೂಹದಿಂದ ನಡೆಯಬೇಕಾಗಿದೆ.

ಕೊಡಗಿನ ಶಿಕ್ಷಣ ಮತ್ತು ಆರೋಗ್ಯ ಸ್ಥಿತಿಗತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದು ಹೊರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯರು ಕೊಡಗಿಗೆ ಬಂದು ಸೇವೆ ಸಲ್ಲಿಸಲು ಮುಂದಾಗಬೇಕಾಗಿದೆ ಯೆಂದು ನುಡಿದ ಅವರು, ಜಿಲ್ಲೆಯಲ್ಲಿ ತಾನು ಅಧಿಕಾರ ವಹಿಸಿಕೊಂಡ ಬಳಿಕ ಗ್ರಾಮೀಣ ಭಾಗಗಳಲ್ಲಿ ನಡೆಸುತ್ತಿರುವ ಜನ ಸಂಪರ್ಕ ಸಭೆಗಳಿಂದ ಅಭಿವೃದ್ಧಿಯ ನಡುವೆಯೂ ಸಾಕಷ್ಟು ಸಮಸ್ಯೆಗಳಿರುವದನ್ನು ಮನಗಂಡಿರುವ ದಾಗಿ ಹೇಳಿದರು.

ಶಾಂತಿ ಪ್ರಿಯವಾದ ಕೊಡಗಿನಲ್ಲಿ ಕಳೆದ ಕೆಲ ಸಮಯಗಳಿಂದ ಕಾನೂನು ಸುವ್ಯವಸ್ಥೆಗಳಿಗಾಗಿ ಶ್ರಮಿಸುವ ಪರಿಸ್ಥಿತಿ ಇರುವದನ್ನು ಸೂಕ್ಷ್ಮವಾಗಿ ಮನಗಂಡಿದ್ದು, ಶಾಂತಿ ಸುವ್ಯವಸ್ಥೆಗಳೊಂದಿಗೆ ಅಭಿವೃದ್ಧಿಯನ್ನು ಕಾಣುವಂತಾಗಲೆಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ‘ಭಾಷೆ’ ಎನ್ನುವದು ಸಂಸ್ಕøತಿಯನ್ನು ಹೊತ್ತೊಯ್ಯುವ ವಾಹನವಾಗಿದೆ. ಈ ಹಿನ್ನೆಲೆಯಲ್ಲಿ ಅವನತಿಯ ಅಂಚಿನಲ್ಲಿರುವ ಕೊಡವ ಭಾಷೆಯನ್ನು ಉಳಿಸುವ ಮೂಲಕ ವಿಶಿಷ್ಟ ಕೊಡವ ಜನಾಂಗವನ್ನು ಸಂರಕ್ಷಿಸಬೇಕಾಗಿದ್ದು, ಇದರ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಿರುಕಾಣಿಕೆಯನ್ನಿತ್ತು ಪುರಸ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ವಿದ್ಯಾನಿಧಿಯ ಅಧ್ಯಕ್ಷ ಕೂತಂಡ ಪಿ. ಉತ್ತಪ್ಪ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ, ಖಜಾಂಚಿ ಕೀತಿಯಂಡ ತಿಮ್ಮಯ್ಯ, ಕಾರ್ಯದರ್ಶಿ ಮೇದೂರ ಪಿ.ಕಾವೇರಿಯಪ್ಪ ಉಪಸ್ಥಿತರಿದ್ದರು.