ಮಡಿಕೇರಿ, ಜ.25 : ಕೊಡಗಿನ ಹೆಮ್ಮೆಯ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 118ನೇ ಜನ್ಮ ದಿನೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ನಿರ್ಧರಿಸಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ತಾ.28 ರಂದು ನಗರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯೆಂದು ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕೇರಳದ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ವೈಸ್ ಅಡ್ಮಿರಲ್ ಎಸ್.ವಿ. ಭೋಕರೆ ಅವರು ಪತ್ನಿ ಸಹಿತರಾಗಿ ಕಾರ್ಯಪ್ಪ ಅವರ ಜನ್ಮ ದಿನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿರುವ ಕಾರ್ಯಪ್ಪ ಅವರ ಕಂಚಿನ ಪ್ರತಿಮೆಗೆ ಭೋಕರೆ ಅವರು ಪುಷ್ಪನಮನ ಸಲ್ಲಿಸಲಿದ್ದಾರೆ. ಕಾರ್ಯಪ್ಪ ಅವರ ಅಭಿಮಾನಿಗಳು, ಮಾಜಿ ಸೈನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಂದರ್ಭ ಹಾಜರಿರುವರು. ಕಾರ್ಯಪ್ಪ ವೃತ್ತದಿಂದ ಸಭಾ ಕಾರ್ಯಕ್ರಮ ನಡೆಯುವ ಕೋಟೆ ಆವರಣದ ವರೆಗೆ ಆಕರ್ಷಕ ಪಥ ಸಂಚಲನ ನಡೆಯಲಿದೆ. ಭೋಕರೆ ಅವರ ಉಪಸ್ಥಿತಿಯಲ್ಲಿ 11.30 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕಾರ್ಯಪ್ಪ ಅವರ ಭಾವ ಚಿತ್ರಗಳ ಸಂಗ್ರಹ ಪ್ರದರ್ಶನಗೊಳ್ಳಲಿದ್ದು, “ಸೈನಿಕರ ಕಣ್ಮಣಿ” ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗುವದು. ನೆÉೀವಿ ಬ್ಯಾಂಡ್ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ 5 ಕಲಾ ತಂಡಗಳು ನಡೆಸಿಕೊಡುವ ಕಾರ್ಯಕ್ರಮ ಜನ್ಮೋತ್ಸವದ ವಿಶೇಷ ಆಕರ್ಷಣೆ ಯಾಗಿದೆ ಎಂದು ಕ| ಸುಬ್ಬಯ್ಯ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜನಪ್ರತಿನಿಧಿಗಳೊಂದಿಗೆ ಲೆ|ಜ|ಬಿ.ಸಿ. ನಂದ, ಮೇ| ಜ| ಬಿ.ಎ. ಕಾರ್ಯಪ್ಪ, ಫೋರಂ ಅಧ್ಯಕ್ಷರಾದ ಕ| ಕೆ.ಸಿ. ಸುಬ್ಬಯ್ಯ, ಮೇ|ಬಿ.ಎ.ನಂಜಪ್ಪ ಪಾಲ್ಗೊಳ್ಳಲಿದ್ದಾರೆ.

ಫೋರಂನ ನಿರಂತರ ಪ್ರಯತ್ನದ ಫಲವಾಗಿ ಪ್ರತಿವರ್ಷ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಕಾರ್ಯಪ್ಪ ಜನ್ಮ ದಿನೋತ್ಸವ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿರುವದು ಸ್ವಾಗತಾರ್ಹವೆಂದು ಕ|ಸುಬ್ಬಯ್ಯ ತಿಳಿಸಿದರು. 2011 ರಿಂದ ನಿರಂತರವಾಗಿ ರಕ್ಷಣಾ ಸಚಿವರು ಹಾಗೂ ಸೇನಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ ಪರಿಣಾಮವಾಗಿ ದೆಹಲಿಯ ಆರ್ಮಿ ಪೆರೇಡ್ ಮೈದಾನಕ್ಕೆ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪೆರೇಡ್ ಗ್ರೌಂಡ್” ಎಂದು ಹೆಸರಿಡಲಾಗಿದೆ. ಈ ಮೈದಾನದ

ವೇದಿಕೆಯಲ್ಲಿ ಫೀ|ಮಾ| ಕಾರ್ಯಪ್ಪ ಅವರ ಬೃಹತ್ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಇದು ಕರ್ನಾಟಕ ಹಾಗೂ ಕೊಡಗಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.

ಸೈನಿಕ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕ ಗೀತಾಶೆಟ್ಟಿ ಮಾತನಾಡಿ, ಸೈನ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಾರ್ಯಪ್ಪ ಅವರ ಜನ್ಮ ದಿನೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಫೋರಂನ ಪ್ರಮುಖರಾದ ಉಳ್ಳಿಯಡ ಪೂವಯ್ಯ ಮಾತನಾಡಿ, ಫೀ| ಮಾ| ಕಾರ್ಯಪ್ಪ ಅವರ ಜನ್ಮ ದಿನವನ್ನು ರಾಷ್ಟ್ರೀಯ ಶಿಸ್ತಿನ ದಿನವನ್ನಾಗಿ ಆಚರಿಸುವಂತಾಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಫೋರಂ ಪ್ರಮುಖರಾದ ಕಲ್ಮಾಡಂಡ ನವೀನ್ ಬೆಳ್ಯಪ್ಪ ಹಾಗೂ ತೇಲಪಂಡ ಸೋಮಯ್ಯ ಉಪಸ್ಥಿತರಿದ್ದರು.