ಮಡಿಕೇರಿ, ಜೂ. 14: ಮಡಿಕೇರಿಯ ತರುಣನೊಬ್ಬನಿಗೆ ಕೇರಳದ ಯುವತಿಯೊಬ್ಬಳು ಗಂಟು ಬಿದ್ದು, ಆಕೆಯೊಡನೆ ಫೋಟೋ ತೆಗೆದು ಗದರಿಸಿದ ತಂಡವೊಂದು ದರೋಡೆ ಮಾಡಿದ ಪ್ರಕರಣ ನಡೆದಿದೆ.

ಮಡಿಕೇರಿಯ ಅಬ್ದುಲ್ಲಾ ಎಂಬಾತ ಪುತ್ತೂರಿನ ಹೊಟೇಲ್ ಒಂದರಲ್ಲಿ ಕುಳಿತಿದ್ದಾಗ ತರುಣಿಯೊಬ್ಬಳು ಬಂದು ಎದುರು ಕೂರುತ್ತಾಳೆ. ಪತಿ ಜೊತೆಯಿಲ್ಲ, ಮಕ್ಕಳು ಮಾತ್ರ ಜೊತೆಯಲ್ಲಿದ್ದಾರೆ ಎಂದು ಕರುಣೆ ಹರಿಸುವ ಮಾತನಾಡುತ್ತಾಳೆ. ತನ್ನ ಮೊಬೈಲ್ ಹಾಳಾಗಿದೆ ಎಂದು ಆತನ ಮೊಬೈಲ್ ಪಡೆದು ಮನೆಯವರಿಗೆ ಎಂದು ಯಾರಿಗೋ ಫೋನ್ ಮಾಡಿ ಆತನನ್ನು ಸೆರೆಯಾಗಿಸುತ್ತಾಳೆ. ತನಗೆ ಎಮ್ಮೆಮಾಡು ದರ್ಗಾಕ್ಕೆ ಹೋಗಬೇಕು ಎಂದು ಹೇಳಿ ಮಡಿಕೇರಿಗೆ ಬರುತ್ತಾಳೆ. ಲಾಡ್ಜ್ ಒಂದರಲ್ಲಿ ಆಕೆಯನ್ನು ಅಬ್ದುಲ್ಲಾ ಉಳಿಸುತ್ತಾನೆ. ಆಕೆಯ ಜೊತೆ ಕುಳಿತಿದ್ದಾಗ ದಿಢೀರನೆ ಯುವಕರ ಗುಂಪೊಂದು ನುಗ್ಗಿ, ಚಿತ್ರೀಕರಣ ಮಾಡಿ ‘ಆಕೆ ನನ್ನ ತಂಗಿ’ ಎಂದು ಹೇಳಿ ಗದರಿಸುತ್ತಾರೆ. ಒಂದಷ್ಟು ಹಣ, ಮೊಬೈಲ್ ಇತ್ಯಾದಿ ಕಿತ್ತು ಮರಳುತ್ತಾರೆ.

ಬೆದರಿದ್ದ ಅಬ್ದುಲ್ಲಾ ದೂರು ನೀಡದಿದ್ದರೂ ಆತನ ಸನಿಹದವರು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಒಬ್ಬನನ್ನು ಕೂಡಲೇ ಬಂಧಿಸಿದ್ದು, ಇತರರ ಶೋಧದಲ್ಲಿದ್ದಾರೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.