ಮಡಿಕೇರಿ, ಜೂ. 9: ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ತಾ. 10 ರಂದು (ಇಂದು) ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕೊಡಗಿನ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಓರ್ವ ಅಭ್ಯರ್ಥಿಯಾಗಿ ಕಣದಲ್ಲಿರುವದು ಕೊಡಗಿನ ಮಟ್ಟಿಗೆ ಹೆಚ್ಚು ಕುತೂಹಲಕಾರಿಯಾಗಿದೆ. ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ 7 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಪ್ತ ಮತದಾನದ ಮೂಲಕ ಚುನಾವಣೆ ನಡೆಯಲಿದ್ದು, ಶಾಸಕರುಗಳು ಮತ ಚಲಾಯಿಸಲಿದ್ದಾರೆ.

ಅಧಿಕ ಸ್ಥಾನ ಹೊಂದಿರುವ ಕಾಂಗ್ರೆಸ್‍ನಿಂದ ವೀಣಾ ಅಚ್ಚಯ್ಯ ಸೇರಿದಂತೆ ನಾಲ್ವರು ಅಭ್ಯರ್ಥಿಗಳಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ತಲಾ 2 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ತಲಾ 2 ಸ್ಥಾನ ಗೆಲ್ಲುವಷ್ಟು ಶಾಸಕರುಗಳನ್ನು ಹೊಂದಿರದಿದ್ದರೂ ಎರಡು ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಗಳನ್ನು ನಿಲ್ಲಿಸಿರುವದು ಕುತೂಹಲ ಮೂಡಿಸಿದೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 29 ಶಾಸಕರುಗಳು ಮತ ನೀಡಬೇಕಾಗಿದೆ.

ಗೆಲುವಿನ ವಿಶ್ವಾಸ

ವಿಧಾನ ಪರಿಷತ್‍ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಓರ್ವರಾಗಿರುವ ಕೊಡಗಿನ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಚುನಾವಣೆ ಎದುರಿಸಬೇಕಾಗಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‍ನ 7 ಸ್ಥಾನಕ್ಕೆ 8 ಅಭ್ಯರ್ಥಿಗಳಿರುವದರಿಂದ ಮತದಾನ ನಡೆಯಬೇಕಿದೆ. 124 ಸದಸ್ಯ ಬಲ

ಹೊಂದಿರುವ ಕಾಂಗ್ರೆಸ್ ತನ್ನ ಸದಸ್ಯ ಬಲಕ್ಕೆ ತಕ್ಕಂತೆ ನಾಲ್ವರನ್ನು ಕಣಕ್ಕಿಳಿಸಿದ್ದು, ಇವರ ಗೆಲುವು ಬಹುತೇಕ ಖಚಿತವಾಗಿದೆ. 44 ಸದಸ್ಯರನ್ನು ಹೊಂದಿರುವ ಬಿಜೆಪಿ ಹಾಗೂ 40 ಸದಸ್ಯರನ್ನು ಹೊಂದಿರುವ ಜೆಡಿಎಸ್‍ಗೆ ತಲಾ ಒಂದೊಂದು ಸ್ಥಾನ ಗೆಲ್ಲಲು ತೊಂದರೆ ಇಲ್ಲ. ಆದರೆ ಹೆಚ್ಚುವರಿ ಮತಗಳನ್ನು ಅವಲಂಬಿಸಿದ 7ನೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಈ ಎರಡು ಪಕ್ಷಗಳು 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವದ ರಿಂದ ಮತದಾನ ಅನಿವಾರ್ಯ ವಾಗಿದೆ.

ಒಬ್ಬರು ನಾಮಕರಣ ಸದಸ್ಯರು ಸೇರಿ ವಿಧಾನ ಸಭೆಯ 225 ಸದಸ್ಯರು ಮತ ಚಲಾಯಿಸಿದರೆ, ವಿಧಾನ ಪರಿಷತ್‍ನಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 29 ಮತಗಳು ಅಗತ್ಯವಿದೆ. ಕಾಂಗ್ರೆಸ್ 124 ಸದಸ್ಯ ಬಲ ಹೊಂದಿದ್ದು, 4 ಅಭ್ಯರ್ಥಿಗಳಿಗೆ ಮತ ಹಂಚಿಕೆ ಮಾಡಿದ ಬಳಿಕ ಈ ಪಕ್ಷದ ಬಳಿ ಇನ್ನೂ 9 ಮತ ಹೆಚ್ಚುವರಿಯಾಗಿ ಉಳಿಯುತ್ತದೆ. ಬಿಜೆಪಿ 44 ಸದಸ್ಯರನ್ನು ಹೊಂದಿದ್ದು, ಮೊದಲ ಅಭ್ಯರ್ಥಿಗೆ ಮತ ಚಲಾಯಿಸಿದ ಬಳಿಕ ಹೆಚ್ಚುವರಿ 15 ಮತ ಉಳಿಯುತ್ತದೆ. ಜೆಡಿಎಸ್ ಮೊದಲ ಅಭ್ಯರ್ಥಿಗೆ ಮತ ನಿಗದಿ ಮಾಡಿದ ನಂತರ 11 ಹೆಚ್ಚುವರಿ ಮತ ಉಳಿಯಲಿದ್ದು, ಮತ್ತೋರ್ವ ಅಭ್ಯರ್ಥಿಯಾಗಿ ಯಾರು ಗೆಲ್ಲಬಹುದೆಂಬದು ಕುತೂಹಲಕಾರಿ ಯಾಗಿದೆ. ಪರಿಷತ್‍ನ 7ನೇ ಸ್ಥಾನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ನಡೆಯಲಿದೆ.