ಶ್ರೀಮಂಗಲ, ನ. 28: 500 ಹಾಗೂ 1000 ನೋಟುಗಳ ಚಲಾವಣೆಯನ್ನು ರದ್ದು ಮಾಡಿ ದೇಶದಲ್ಲಿರುವ ಕಪ್ಪು ಹಣ ವಾಪಾಸ್ಸಾತಿಗೆ ಕ್ರಮ ಕೈಗೊಂಡಿರುವ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಟಿ.ಶೆಟ್ಟಿಗೇರಿ ಬಿ.ಜೆ.ಪಿ ಸ್ಥಾನೀಯ ಸಮಿತಿ ವತಿಯಿಂದ ಬ್ಯಾಂಕ್ ಸಿಬ್ಬಂದಿಗಳಗೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ ದಿನ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೆರ ಈಶ್ವರ ಅವರು ದೇಶದಲ್ಲಿ ಕಪ್ಪು ಹಣದ ವಿರುದ್ಧ ನಿಷ್ಠೂರವಾದ ಕ್ರಮ ಜರುಗಿಸಿರುವದು ಸರಿಯೇ ಅಥವಾ ಇದರ ವಿರುದ್ಧ ಪ್ರತಿಭಟಿಸಿ ಭಾರತ ಬಂದ್‍ಗೆ ಕರೆ ನೀಡಿರುವದು ಸರಿಯೇ ಎನ್ನುವದನ್ನು ಸಾರ್ವಜನಿಕರು ತೀರ್ಮಾನಿಸಬೇಕು. ದೇಶಾದ್ಯಂತ ಇಂದು ಕೆಲವು ಪಕ್ಷಗಳು ಆಕ್ರೋಶ ದಿನ ಆಚರಿಸುತ್ತಿರುವದು ಸರಿಯಲ್ಲ. ಆದರೆ ಬಿ.ಜೆ.ಪಿ ಈ ದಿನವನ್ನು ಸಂಭ್ರಮ ದಿನವಾಗಿ ಆಚರಿಸುತ್ತದೆ.

ಬ್ಯಾಂಕ್‍ಗಳು ತಮ್ಮ ರಜಾ ದಿನಗಳಲ್ಲೂ ನಿಗದಿತ ವೇಳೆಗಿಂತ ಹೆಚ್ಚಾಗಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ನೋಟು ರದ್ದು ಕ್ರಮದ ಸಂದರ್ಭ ಸಹಕಾರ ನೀಡಿವೆ. ಹಾಗೆ ಸಾರ್ವಜನಿಕರೂ ಸಹ ಪಕ್ಷ ಭೇಧ ಮರೆತು ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದ್ದರಿಂದ ಬ್ಯಾಂಕ್ ನವರಿಗೆ ಹಾಗೂ ಸಾರ್ವಜನಿಕರಿಗೆ ಬಿ.ಜೆ.ಪಿ ವತಿಯಿಂದ ಸಿಹಿ ಹಂಚಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಞಂಗಡ ಕೃಷ್ಣ, ಸ್ಥಾನೀಯ ಸಮಿತಿ ಕಾರ್ಯದರ್ಶಿ ಮಾಣೀರ ಉಮೇಶ್, ಗ್ರಾ.ಪಂ. ಸದಸ್ಯ ರಂಜು ಕರುಂಬಯ್ಯ ಪ್ರಮುಖರಾದ ಉಳುವಂಗಡ ದತ್ತ, ನಟೇಶ್, ದಿನೇಶ್, ಪ್ರಜಾ, ಚಟ್ಟಂಗಡ ರಾಜ, ಕಟ್ಟೆರ ಮಿಲನ್, ಕವನ್ ಮತ್ತಿತರರು ಹಾಜರಿದ್ದರು.