ಮಡಿಕೇರಿ, ಡಿ. 11: ಸಂಗೀತ ಗ್ರಾಮ.., ಹೀಗೊಂದು ಗ್ರಾಮವಿದೆಯೆ ಎಂದು ಹುಬ್ಬೇರಿಸುವವರೆ ಹೆಚ್ಚು. ಆದರೆ ಆ ಗ್ರಾಮಕ್ಕೊಮ್ಮೆ ಭೇಟಿ ಕೊಟ್ಟು ಹಿಂತಿರುಗಿದರೆ ಸಂಗೀತ ಗ್ರಾಮದ ಸವಿ ಮನದಿಂದ ಎಂದಿಗೂ ಮಾಸುವದಿಲ್ಲ. ಏಕೆಂದರೆ ಅದು ಸಪ್ತ ಸ್ವರ ದೇವತೆಗಳ ಸನ್ನಿಧಿ...ಕೊಡಗಿನ ನೆರೆ ಜಿಲ್ಲೆ ಹಾಸನದ ಅರಕಲಗೋಡು ತಾಲೂಕಿನ ರುದ್ರಪಟ್ಟಣ ಎಂಬ ಊರಿನಲ್ಲಿರುವ ಸಂಗೀತ ಗ್ರಾಮ ಎಂಬ ಪ್ರದೇಶದ ಸೊಬಗನ್ನು ನೋಡಿಯೇ ಸವಿಯಬೇಕು. ಸಂಗೀತ ವಿದ್ವಾನ್ ಗಾನ ಕೋಗಿಲೆ ಆರ್.ಕೆ. ಪದ್ಮನಾಭ್ ಹುಟ್ಟೂರಾಗಿರುವ ಸಂಗೀತ ಗ್ರಾಮದಲ್ಲಿ 10 ಸಾವಿರ ಚ. ಅಡಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ವೀಣೆಯಾಕಾರದ ಮಂದಿರ ನಿರ್ಮಿಸಲಾಗಿದ್ದು, ಅದರೊಳಗೆ ಸಂಗೀತ ಹಾಗೂ ಕೀರ್ತನೆಗಳ ಪಿತಾಮಹರುಗಳಾದ ಶಾರದೆ, ವಾದಿರಾಜರು, ಕನಕದಾಸರು, ತ್ಯಾಗರಾಜರು, ಶಾಮಶಾಸ್ತ್ರಿಗಳು ಮತ್ತು ಸ್ವಾಮಿ ದೀಕ್ಷಿತರು ಪುರಂದರ ದಾಸರು ಆರಾಧಿಸಲ್ಪಡುತ್ತಿದ್ದಾರೆ.ಅಲ್ಲಿಗೆ ಭೇಟಿ ನೀಡುವ ಮಂದಿ ಆ ಮಂದಿರದೊಳಗೆ ಕುಳಿತು ತಮ್ಮ ತಮ್ಮ ಮನಸ್ಸಿನಲ್ಲಿ ಗೋತ್ರ, ನಕ್ಷತ್ರಗಳನ್ನು ಸ್ಮರಿಸಿ ಕಣ್ಮುಚ್ಚಿ ತನ್ಮಯರಾದರೆ ಗಾನಕೋಗಿಲೆ ಪದ್ಮನಾಬ್ ಅವರ ಕಂಠಸಿರಿಯಲ್ಲಿ ಪೂಜಾ ವಿಧಿವಿಧಾನಗಳ ವಿವರ ‘ಸ್ಪೀಕರ್’ಗಳಲ್ಲಿ ಕೇಳಿ ಬರುತ್ತದೆ. ಆ ಧ್ವನಿ ಆಲಿಸುತ್ತಲೇ ಅದಕ್ಕನುಗುಣವಾಗಿ ಪೂಜಾ ವಿಧಿ ವಿಧಾನಗಳು ನಡೆಯತ್ತವೆ. ಸುಮಾರು 20 ನಿಮಿಷಗಳ ಕಾಲ ನಡೆಯುವ ಪೂಜೆ ಎಂಥವರನ್ನು ಕೂಡ ಮಂತ್ರ ಮುಗ್ಧರನ್ನಾಗಿಸುತ್ತದೆ. ಗಾಯಕ ರಾಗಿದ್ದರೆ ತನ್ನಿಂತಾನೆ ಬಾಯಿಯಿಂದ ಹಾಡುಗಳು ಹೊರಹೊಮ್ಮುತ್ತವೆ. ಹಾಡುವ ಛಾಳಿ ಇಲ್ಲದವರೂ ಕೂಡ ಮನದೊಳಗೆ ಸ್ವರವನ್ನು ಗುನುಗುನಿಸುತ್ತಾರೆ ಎಂದರೆ ನೀವೆ ಊಹಿಸಿ ಹೇಗಿರಬಹುದು ಸಂಗೀತ ಗ್ರಾಮದ ಕರಾಮತ್ತು!

ಸಂಗೀತ ಗ್ರಾಮದಲ್ಲಿ ಪ್ರತಿ ಬಾರಿ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಸುಮಾರು 200 ಕಲಾವಿದರು ಗಾನ ಸುಧೆ ಹರಿಸುತ್ತಾರೆ. ಸಪ್ತಸ್ವರ ಮಂದಿರ ಸ್ಥಾಪನೆಗೆ ಕಾರಣೀಭೂತರಾದ ಆರ್.ಕೆ. ಪದ್ಮನಾಭ್ ಅವರು ಮಂದಿ ರದ ಬಳಿಯಲ್ಲಿ 5 ಎಕರೆ ಜಾಗವನ್ನು ಸಂಗೀತ ವಿದ್ವಾಂಸರಿಗೆಂದೇ ಮೀಸಲಿಟ್ಟಿದ್ದಾರೆ.

ಮಂದಿರದ ಅನತಿ ದೂರದಲ್ಲಿ ರಾಮ ಮಂದಿರವಿದೆ. ಅದರ ಒಳ ಪ್ರವೇಶಿಸಿದರೆ, ಸಂಗೀತ ಕ್ಷೇತ್ರದ ದಿಗ್ಗಜರ ನೂರಕ್ಕೂ ಅಧಿಕ ಭಾವಚಿತ್ರಗಳು ಅಲ್ಲಿ ರಾರಾಜಿಸುತ್ತಿವೆ. ಸಪ್ತಸ್ವರ ಮಂದಿರದ ಸುತ್ತಲೂ ಹಸಿರು ಹುಲ್ಲಿನ ಹಾಸು ನೋಡುಗರನ್ನು ಮತ್ತಷ್ಟು ಸೆಳೆಯುತ್ತದೆ. ಆ ರಾಮಮಂದಿರದಲ್ಲಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪಿಟೀಲು ಚೌಡಯ್ಯ, ಕೃಷ್ಣಮೂರ್ತಿ, ಭಾಗವತರಂತಹ ದಿಗ್ಗಜರು ಪುರಾತನ ಕಾಲದಿಂದಲೂ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದರಂತೆ.

(ಮೊದಲ ಪುಟದಿಂದ)

ಸಂಗೀತ ಗ್ರಾಮದಲ್ಲಿ ಜಾನಪದ ಪರಿಷತ್ ಬಳಗ

ಕೊಡಗಿನಲ್ಲಿ ಆರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೊಡಗು ಜಾನಪದ ಪರಿಷತ್‍ನ ಬಳಗದ ಪ್ರಥಮ ಅಧ್ಯಯನ ಪ್ರವಾಸವಾಗಿ ಸುಮಾರು 60 ಮಂದಿ ನಿನ್ನೆ ಸಂಗೀತ ಗ್ರಾಮಕ್ಕೆ ಭೇಟಿ ಕೊಟ್ಟಿತು. ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರ ನೇತೃತ್ವದಲ್ಲಿ ತೆರಳಿದ ತಂಡ ಅಲ್ಲಿನ ಇತಿಹಾಸ ಹಾಗೂ ವಿಶೇಷತೆ ಬಗ್ಗೆ ಮಾಹಿತಿ ಸಂಗ್ರಹಿಸಿತು. ಸಪ್ತಸ್ವರ ಮಂದಿರದ ಅರ್ಚಕರಾದ ಮಾರ್ಕಂಡೇಯ, ಪಾರುಪತ್ತೆಗಾರ ರಮೇಶ್ ಭಟ್, ಸ್ಥಳೀಯ ಪ್ರಮುಖರಾದ ಕುಮಾರಸ್ವಾಮಿ, ಸಿದ್ಧರಾಜು, ಜಮೀರ್ ಅಹ್ಮದ್ ಇವರುಗಳು ಸಂಗೀತ ಗ್ರಾಮದ ಸಮಗ್ರ ಮಾಹಿತಿ ನೀಡಿದರು. ನಂತರ ಪೂಜೆಯಲ್ಲಿ ಪಾಲ್ಗೊಂಡ ಜಾನಪದ ಪರಿಷತ್ ಬಳಗ ಅಲ್ಲಿನ ಪೂಜಾವಿಧಿ ವಿಧಾನಗಳು ನಿಬ್ಬೆರಗಾಗಿ ಸುವಂತಿತ್ತು.

ಪರಿಷತ್‍ನ ಕೆಲ ಮಂದಿ ಪೂಜೆಯ ಬಳಿಕ ಧಾರ್ಮಿಕ ಗೀತೆಗಳನ್ನು ಹಾಡಿದರು. ನಂತರ ಅಲ್ಲಿಂದ ಹಿಂತಿರುಗುವಾಗ ಮಾತನಾಡಿದ ಅಲ್ಲಿನ ಸ್ಥಳೀಯ ಪ್ರಮುಖರು ಸಂಗೀತ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಸಂಗೀತೋತ್ಸವವನ್ನು ಒಮ್ಮೆ ವೀಕ್ಷಿಸುವಂತೆಯೂ ಆಹ್ವಾನ ನೀಡಿದರಲ್ಲದೆ ಆದರದಿಂದ ಬೀಳ್ಕೊಟ್ಟರು. ನಂತರ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯಕ್ಕೂ ಭೇಟಿ ನೀಡಿ ರಾಮನಾಥಪುರದ ಸೊಬಗನ್ನು ಆಸ್ವಾದಿಸಿ ಹಿಂತಿರುಗಿತು.

ಪ್ರವಾಸದಲ್ಲಿ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಸೋಮವಾರಪೇಟೆಗಳಿಂದ ಸುಮಾರು ಅರವತ್ತು ಮಂದಿ ಒಂದೇ ಬಸ್ಸಿನಲ್ಲಿ ಪ್ರವಾಸ ಕೈಗೊಂಡರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷರುಗಳಾದ ಅನಿಲ್, ಚಂದ್ರಮೋಹನ್, ಮಹೇಶ್ ನಾಚಯ್ಯ, ಹೋಬಳಿ ಅಧ್ಯಕ್ಷ ಮುರಳೀಧರ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಬಾಚರಣಿಯಂಡ ಅಪ್ಪಣ್ಣ, ಐಮುಡಿಯಂಡ ರಾಣಿ ಮಾಚಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭಾರತೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಅವರುಗಳೂ ಇದ್ದ ತಂಡ ಪ್ರವಾಸ ತೆರಳಿತ್ತು.

ಕಾವೇರಿ ನದಿ ಸಂರಕ್ಷಣೆ ನಿಟ್ಟಿನಲ್ಲಿ ಕೊಡಗು ಜಾನಪದ ಪರಿಷತ್ ಸದಸ್ಯರುಗಳು ನದಿ ಸಂರಕ್ಷಣೆ ಅಂಗವಾಗಿ ಅಂಚೆಕಾರ್ಡ್ ಚಳುವಳಿಯಲ್ಲಿ ಪಾಲ್ಗೊಂಡರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಸರ್ವೋಚ್ಛ ನ್ಯಾಯಾಲಯ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸುವ ಸಲುವಾಗಿ ಅಂಚೆ ಕಾರ್ಡ್ ಚಳುವಳಿ ಹಮ್ಮಿಕೊಂಡಿತ್ತು.