ಶನಿವಾರಸಂತೆ, ಆ. 21: ಶನಿವಾರಸಂತೆ ಗ್ರಾ.ಪಂ.ನ 1ನೇ ವಿಭಾಗದ ಬಿಸಿಎಂ ಬಿ ಮೀಸಲಾತಿಯ ಸದಸ್ಯ ಸ್ಥಾನ ತೆರವಾಗಿದ್ದು, ಈ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ತಾ. 19 ಕೊನೆಯ ದಿನವಾಗಿದ್ದು, ವಿವಿಧ ಪಕ್ಷಗಳ ಗುಂಪಿನಿಂದ 5 ಮಂದಿ ಅಭ್ಯರ್ಥಿಗಳು ನಾಪತ್ರ ಸಲ್ಲಿಸಿದ್ದಾರೆ.

1ನೇ ವಿಭಾಗದ ಗ್ರಾ.ಪಂ.ನ ಸದಸ್ಯರಾಗಿ ಆಯ್ಕೆಯಾಗಿದ್ದ ಬಿ.ಎಸ್. ಅನಂತಕುಮಾರ್ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ತಾ.ಪಂ. ಸದಸ್ಯರಾಗಿ ಆಯ್ಕೆಯಾದ ಕಾರಣ ಶನಿವಾರಸಂತೆ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ತೆರವಾದ ಸ್ಥಾನಕ್ಕೆ ತಾ. 28 ರಂದು ಚುನಾವಣೆ ನಡೆಯಲಿದೆ. ವಿವಿಧ ಪಕ್ಷಗಳ ಗುಂಪಿನಿಂದ ಅಭ್ಯರ್ಥಿಗಳಾದ ಎಸ್.ಆರ್. ಮಂಜುನಾಥ್, ಕೆ.ಎಂ. ಜಗನ್‍ಪಾಲ್, ಎಸ್.ಎ. ಆದಿತ್ಯ, ಎಂ.ವಿ. ಪುನೀತ್, ಕೆ.ಟಿ. ಹರೀಶ್ ತಮ್ಮ ಬೆಂಬಲಿಗರೊಂದಿಗೆ ಪಂಚಾಯಿತಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಾಮಚಂದ್ರ ಮೂರ್ತಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ತಾ. 22 ರಂದು (ಇಂದು) ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಕಡೆಯ ದಿನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.