ಗೋಣಿಕೊಪ್ಪಲು, ಜೂ. 10: ಗೋಣಿಕೊಪ್ಪಲು ಕಸ ವಿಲೇವಾರಿ ಹಾಗೂ ಸ್ವಚ್ಛತೆಗೆ ಬಿಜೆಪಿ ಮೊದಲಿನಿಂದಲೂ ಒತ್ತು ನೀಡುತ್ತಾ ಬಂದಿದೆ. ಇಲ್ಲಿನ ಜಿ.ಪಂ. ಮೀಸಲಾತಿಗೂ ಮುನ್ನವೇ ಕಸ ವಿಲೇವಾರಿಗೆ ಸ್ಥಳದ ಅಭಾವವಿದ್ದ ಸಂದರ್ಭ ಇಲ್ಲಿನ ಪರಿಮಳ ಮಂಗಳ ವಿಹಾರ ಹಿಂಭಾಗ ತನ್ನ ಸ್ವಂತ ಜಾಗದಲ್ಲಿ ಕಸ ವಿಲೇವಾರಿಗೆ ಅವಕಾಶ ಕಲ್ಪಿಸಿದ್ದು ನಿಜ. ರಾಜಕಾರಣಕ್ಕಾಗಿ ತಾನು ಅವಕಾಶ ಕಲ್ಪಿಸಲಿಲ್ಲ. ಅಲ್ಲಿನ ಗುಂಡಿ ಮುಚ್ಚಿದ ನಂತರ ಕಸ ವಿಲೇವಾರಿಗೆ ಸ್ಥಳವಿರಲಿಲ್ಲ. ಇದೇ ಸಂದರ್ಭ ತನ್ನ ಮಾವನವರಾದ ಗಣೇಶ್ ಅವರು ನಂತರ ಅವಕಾಶ ನಿರಾಕರಿಸಿದರು. ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರು ಅವಕಾಶ ರಾಜಕಾರಣ ಮಾಡಿರುವದಾಗಿ ನನ್ನನ್ನು ಟೀಕಿಸಿದ್ದಾರೆ. ಇದೀಗ ಅವರಿಗೆ ಗೋಣಿಕೊಪ್ಪಲು ನಗರಾಭಿವೃದ್ಧಿ ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ಇದ್ದಲ್ಲಿ ತಮ್ಮ ಜಾಗದಲ್ಲಿ ನನ್ನಂತೆಯೇ ಕಸ ವಿಲೇವಾರಿಗೆ ಅವಕಾಶ ಕಲ್ಪಿಸಲಿ ಎಂದು ಬಿಜೆಪಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಸವಾಲೆಸೆದರು.

ಗೋಣಿಕೊಪ್ಪಲು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯರ ಪಾಲಾದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವೀರಾಜಪೇಟೆ ತಾಲೂಕಿನಾದ್ಯಂತ ಅಲ್ಲಲ್ಲಿ ಕಸ ವಿಲೇವಾರಿ ಸಮಸ್ಯೆ ಕಾಡುತ್ತಾ ಇದೆ. ಈ ನಿಟ್ಟಿನಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರೊಂದಿಗೆ ಚರ್ಚಿಸುವ ಮೂಲಕ ತಾಲೂಕಿನ ಎಲ್ಲಾ ಜಿ.ಪಂ. ಸದಸ್ಯರು ಒಗ್ಗೂಡಿ ತಾಲೂಕಿನ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಹಾಗೂ ಸುಮಾರು ರೂ. 60 ಲಕ್ಷಕ್ಕೂ ಅಧಿಕ ಅನುದಾನ ಅಗತ್ಯವಿದ್ದು, ಜಿ.ಪಂ. ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಂಡಿಸಲಾಗುವದು. ಪೆÇನ್ನಂಪೇಟೆ ಸಮೀಪ ವೈಜ್ಞಾನಿಕ ಕಸವಿಲೇವಾರಿ ನಿಟ್ಟಿನಲ್ಲಿಯೂ ಸ್ವಚ್ಛ ಭಾರತ ಅಭಿಯಾನ ನಿಟ್ಟಿನಲ್ಲಿ ಗೋಣಿಕೊಪ್ಪಲು ಗ್ರಾ.ಪಂ.ಗೆ ರೂ. 20 ಲಕ್ಷ ಅನುದಾನ ಸಿಗಲಿದ್ದು, ಇದನ್ನು ನೀಡಲಾಗುವದು. ಈಗಾಗಲೇ ಪೆÇನ್ನಂಪೇಟೆ ಹಾಗೂ ಅರುವತ್ತೊಕ್ಕಲು ಗ್ರಾ.ಪಂ.ಗಳು ಸ್ವಚ್ಛ ಭಾರತ ಅಡಿಯಲ್ಲಿ ಲಭ್ಯವಾದ ಹಣವನ್ನು ಸೀತಾ ಕಾಲೋನಿಯಲ್ಲಿ ಸುತ್ತಲ ಆವರಣ ಗೋಡೆಗೆ ಅನುದಾನ ಕಲ್ಪಿಸಲಾಗಿದೆ. ಈ ಹಿಂದಿನ ಗೋಣಿಕೊಪ್ಪಲಿನ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಧ್ಯಕ್ಷೆ ನಿರ್ಲಕ್ಷ್ಯ ತಾಳಿದ ಹಿನ್ನೆಲೆ ಸೀತಾ ಕಾಲೋನಿಗೆ ಅಗತ್ಯ ಅನುದಾನ ನೀಡಲು ಸಾಧ್ಯ ವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ತನ್ನ ಜಿ.ಪಂ. ಅನುದಾನದಲ್ಲಿ ರೂ. 8.70 ಲಕ್ಷ ರಸ್ತೆ ಅಭಿವೃದ್ಧಿಗಾಗಿ, ರೂ. 2.80 ಲಕ್ಷ ಮೊತ್ತವನ್ನು ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಗೋಣಿಕೊಪ್ಪಲು ಬೈಪಾಸ್ ರಸ್ತೆ ಅಭಿವೃದ್ಧಿಗೂ ಹಣ ಮೀಸಲಿರಿಸ ಲಾಗಿದೆ ಎಂದು ಹೇಳಿದರು.

ವೀರಾಜಪೇಟೆ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಮಾತನಾಡಿ, ನಮಗೆ ಈ ಬಾರಿ ಬಹುಮತ ಇರಲಿಲ್ಲ. ಈಗಿದ್ದೂ ಕೇವಲ 6 ಸ್ಥಾನವನ್ನು ಗೋಣಿಕೊಪ್ಪಲು ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಲಭ್ಯವಾಗಿದೆ. ಗೋಣಿಕೊಪ್ಪಲಿನಲ್ಲಿ ಹಲವು ಸಮಸ್ಯೆಗಳಿವೆ. ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ವತಿಯಿಂದಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ರಾಜ್ಯ ಎಫ್‍ಕೆಸಿಸಿಐ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಮಾತನಾಡಿ, ಈ ಹಿಂದೆ ಗೋಣಿಕೊಪ್ಪಲು ಗ್ರಾ.ಪಂ. ಅಡಳಿತ ಕಾಂಗ್ರೆಸ್ ಪಕ್ಷದ ವಶವಾಗಿದ್ದಾಗಲೂ ಅಭಿವೃದ್ಧಿಯ ದೃಷ್ಟಿಯಿಂದ ರೂ. 4 ಕೋಟಿಗೂ ಅಧಿಕ ಅನುದಾನವನ್ನು ಅಂದಿನ ಸ್ಪೀಕರ್ ಆಗಿದ್ದ ಸಂದರ್ಭ ಶಾಸಕ ಬೋಪಯ್ಯ ಅವರು ಕಲ್ಪಿಸುವ ಮೂಲಕ ಇಲ್ಲಿನ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಇದೀಗ ವೀರಾಜಪೇಟೆ ತಾಲೂಕು ಪಂಚಾಯಿತಿ, ಜಿ.ಪಂ., ಎಂ.ಎಲ್.ಎ., ಎಂ.ಎಲ್.ಸಿ. ಹಾಗೂ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷೆ ಸ್ಥಾನವೂ ಬಿಜೆಪಿ ವಶವಾಗಿದ್ದು ಗೋಣಿಕೊಪ್ಪಲು ನಗರಾಭಿವೃದ್ಧಿಗೆ ನಿಷ್ಪಕ್ಷಪಾತವಾಗಿ ಶ್ರಮಿಸಲಾಗುವದು. ಇಲ್ಲಿನ ಕಾಂಗ್ರೆಸ್ ಮುಖಂಡರಲ್ಲಿ ಒಮ್ಮತವಿಲ್ಲ. ನಗರಾಭಿವೃದ್ಧಿ ಚಿಂತನೆ ಇಲ್ಲ. ಕೇವಲ ಪ್ರತಿಷ್ಠೆಯ ಕಾದಾಟವಿದ್ದು ಬಿಜೆಪಿ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಮಾಜಿ ತಾ.ಪಂ. ಅಧ್ಯಕ್ಷ ವಿ.ಎ. ವೆಂಕಟೇಶ್ ಮಾತನಾಡಿ, ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂದರ್ಭ ಚುನಾವಣಾಧಿಕಾರಿ ಮುರುಳಿ ದುರ್ಗಪ್ಪ ಅವರು ಉತ್ತಮವಾಗಿ ತಮ್ಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಇದೇ ಸಂದರ್ಭ ಮೀಸಲಾತಿ ಅನ್ವಯ ಬಿಜೆಪಿ ಬೆಂಬಲಿತ ಸೆಲ್ವಿಯ ಮನೆಗೆ ತೆರಳಿ ಕೆಲವು ಕಾಂಗ್ರೆಸ್ ಮುಖಂಡರು ಆಸೆ-ಆಮಿಷ ಒಡ್ಡಿದ್ದಾರೆ. ಚುನಾವಣಾಧಿಕಾರಿ ವಿರುದ್ಧ ಬ್ಲಾಕ್ ಮೇಲ್ ತಂತ್ರ ಅಳವಡಿಸಲು ಹೋಗಿ ವಿಫಲರಾಗಿದ್ದಾರೆ. ಓರ್ವ ಅಧಿಕಾರಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲು ಇವರಿಗೆ ತಿಳಿದಿಲ್ಲ. ಕಾಂಗ್ರೆಸ್ ಚುನಾಯಿತ ಸದಸ್ಯರು ತಮ್ಮದೇ ತಪ್ಪಿಗೆ ಇದೀಗ ಉಪಾಧ್ಯಕ್ಷೆ ಸ್ಥಾನವನ್ನೂ ಕಳೆದುಕೊಂಡಿದ್ದು, ಮುಖಭಂಗ ತಪ್ಪಿಸಲು ಅನಗತ್ಯವಾಗಿ ಚುನಾವಣಾಧಿಕಾರಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ನೋಡುತ್ತಿದ್ದಾರೆ. ಚುನಾವಣಾಧಿಕಾರಿಗೆ ಚುನಾವಣೆ ನಡೆಸಲು ಬರುತ್ತಿಲ್ಲ, ಟ್ಯೂಷನ್ ನೀಡಬೇಕು ಎಂದು ಅಪಹಾಸ್ಯ ಮಾಡಿದ್ದು ಉತ್ತಮ ರಾಜಕೀಯ ನಡೆಯಲ್ಲ. ಗೋಣಿಕೊಪ್ಪಲು ಸರ್ವಾಂಗೀಣ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಸಾಧ್ಯವೇ ವಿನಃ ಕಾಂಗ್ರೆಸ್ಸಿಗೆ ಸಾಧ್ಯವಿಲ್ಲ ಎಂದು ಹೇಳಿದರು.

- ಟಿ.ಎಲ್.ಎಸ್.