ಗೋಣಿಕೊಪ್ಪಲು, ಆ. 21: ಇತಿಹಾಸದ ಪುಟಗಳನ್ನು ತಿರುವಿದಾಗ ತನ್ನಲ್ಲಿ ಆತ್ಮವಿಶ್ವಾಸ ಮತ್ತು ದೃಢವಾದ ನಂಬಿಕೆಯಿಂದ ತನ್ನ ಗುರಿಯೆಡೆ ಸಾಗಿದ ವ್ಯಕ್ತಿಗಳನ್ನು ಮಾತ್ರ ಕಾಣಲು ಸಾಧ್ಯವಿದೆ ಎಂದು ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಡಾ. ಚಂದ್ರಶೇಖರ್ ಮಾಹಿತಿ ನೀಡಿದರು.

ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಕಾಕಮಾಡ ನಾಣಯ್ಯ ದತ್ತಿನಿಧಿ ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರಸ್ತುತ ಸಮಾಜದ ಹಾಗೂ-ಹೋಗುಗಳ ಬಗ್ಗೆ ಬೆಳಕು ಚೆಲ್ಲಿದರು. ಮಕ್ಕಳಲ್ಲಿ ಇಂದು ಆತ್ಮವಿಶ್ವಾಸದ ಕೊರತೆಯನ್ನು ನೀಗಿಸುವಲ್ಲಿ ವಿದ್ಯಾಸಂಸ್ಥೆಗಳು ವಿಫಲವಾಗಿದ್ದು, ಕೇವಲ ಹಣ ಮಾಡುವ ಸಂಸ್ಥೆಯಾಗಿ ಬೆಳೆದಿರುವದು ದುಃಖಕರ ಸಂಗತಿ ಎಂದು ಹೇಳಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಮಾತ್ರ ಸಾಲದು, ಆತನಲ್ಲಿ ಉತ್ತಮ ನಾಯಕತ್ವದ ಗುಣಗಳ ಜೊತೆ ಸಮಾಜವನ್ನು ಮುನ್ನಡೆಸುವ ಶಕ್ತಿಯನ್ನು ತುಂಬಬೇಕು. ಇಂದು ಸಮಯ ಸಾಕಷ್ಟಿದ್ದರೂ ಅದರ ಉತ್ತಮ ನಿರ್ವಹಣೆ ಮಾಡದೆ ಬಹುಮುಖಿಯಾಗಿ ಬೆಳೆಯಲು ಸಾಧ್ಯವಾಗಿಲ್ಲ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೇದಿಕೆಯ ಭಯ ಸರ್ವೆ ಸಮಾನ್ಯವಾಗಿದ್ದು, ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸು ವದರಿಂದ ಭಯವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿ, ಭಾಷಣ ಸ್ಪರ್ಧೆಯಲ್ಲಿ ನೀಡಿದ ವಿಚಾರಗಳು ಮಕ್ಕಳಲ್ಲಿ ಉತ್ತಮ ವಿಚಾರ ಮೂಡಲಿ ಎಂದು ಇಂದಿನ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಚಾರವನ್ನೆ ನೀಡಿದ್ದು, ಮಕ್ಕಳ ವಯಸ್ಸಿಗೆ ಮೀರಿದ ವಿಚಾರವನ್ನು ಉತ್ತಮವಾಗಿ ಮಂಡಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕನ್ನಡ ಮತ್ತು ಇಂಗ್ಲೀಷ್ ಭಾಷೆ ಎರಡರ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಮಯದಲ್ಲಿ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗ ಕನ್ನಡದಲ್ಲಿ ತೃತೀಯ ಸ್ಥಾನ, ರಾಶಿಕ್ ಎಂ.ಎ. ಸರ್ವದೈವತಾ, ದ್ವಿತೀಯ ಸ್ಥಾನ ಪ್ರೇಕ್ಷ ಬಿ.ಎ. ಅಪ್ಪಚ್ಚ ಕವಿ, ಪ್ರಥಮ ಸ್ಥಾನವನ್ನು ಕಲ್ಪಿತಾ ಜೆ.ಬಿ. ಕಾಲ್ಸ್ ಪಡೆದುಕೊಂಡರೆ. ಇಂಗ್ಲೀಷ್‍ನಲ್ಲಿ ತೃತೀಯ ಸ್ಥಾನ, ಅಮೃತ್ ಬೋಪಣ್ಣ ಲಯನ್ಸ್, ದ್ವೀತಿಯ ಸ್ಥಾನ ಆಶಿತಾ ಅಪ್ಪಚ್ಚ ಕವಿ, ಪ್ರಥಮ ಸ್ಥಾನವನ್ನು ಪೊನ್ನಮ್ಮ ಟಿ.ಪಿ. ಸಂತ ಅಂತೋಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪಾಲಾಯಿತು. ಪ್ರಾಥಮಿಕ ವಿಭಾಗದಲ್ಲಿ ಕನ್ನಡ ಸ್ನೇಹ ಪ್ರತಿಭಾ ಶಾಲೆ ತೃತೀಯ, ಶ್ರೇಯಸ್ ಅಪ್ಪಚ್ಚ ಕವಿ ಶಾಲೆ ದ್ವಿತೀಯ, ಶಂಶೀರ್ ಪ್ರತಿಭಾ ಶಾಲೆ ಪ್ರಥಮ. ಇಂಗ್ಲೀಷ್‍ನಲ್ಲಿ ವರುಣ್ ಉತ್ತಯ್ಯ ಅಪ್ಪಚ್ಚ ಕವಿ ಶಾಲೆ ತೃತೀಯ, ಬಬಿತಾ ಎಸ್.ಎಂ.ಎಸ್. ದ್ವಿತೀಯ, ಆರ್ಯ ಚೋಂದಮ್ಮ ಕಾಲ್ಸ್ ಶಾಲೆ ಪ್ರಥಮ ಸ್ಥಾನ ಗಳಿಸಿದರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಕಿರಿಯಮಾಡ ಗಣೇಶ್, ಭಾಗ್ಯ ಬಿ.ಎನ್., ಬೀನಾ ರೋಜಿ, ಡಾ. ಸೋಮಣ್ಣ, ಮಹಮದ್ ಅಕ್ರಂ, ಅರ್ಜುನ್, ಶಾಲಾ ಮುಖ್ಯ ಶಿಕ್ಷಕಿ ತನುಜ, ಶಾಲಾ ಆಡಳಿತ ಮಂಡಳಿ ಆಡಳಿತಾಧಿಕಾರಿ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಕಾಮುಣಿ ಪೂಣಚ್ಚ, ಖಜಾಂಚಿ ಮೂಕಳೇರ ಮಧು ಕುಮಾರ, ಮಾಜಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಜರಿದ್ದರು.