ಶ್ರೀಮಂಗಲ, ಜೂ. 9: ಬಿರುನಾಣಿಯಲ್ಲಿ ವೀರಾಜಪೇಟೆ ತಾ.ಪಂ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನೆಲ್ಲೀರ ಚಲನ್ ಕುಮಾರ್ ಹಾಗೂ ಬಿಟ್ಟಂಗಾಲ ಕ್ಷೇತ್ರದಿಂದ ಜಿ.ಪಂ.ಗೆ ಆಯ್ಕೆಯಾಗಿರುವ ಅಪ್ಪಂಡೇರಂಡ ಭವ್ಯ ಅವರನ್ನು ಬಿರುನಾಣಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೆಲ್ಲೀರ ಚಲನ್ ಕುಮಾರ್ ಅವರು ಜಿಲ್ಲೆಯಲ್ಲಿ ಹಿರಿಯರು ಬಿಜೆಪಿ ಪಕ್ಷವನ್ನು ಭದ್ರವಾಗಿ ಕಟ್ಟಿ ಬೆಳೆಸಿದ್ದಾರೆ. ಇದರ ಫಲವಾಗಿ ನನಗೆ ಹುದಿಕೇರಿ ಕ್ಷೇತ್ರದಿಂದ ಸುಲಭವಾಗಿ ಗೆಲವು ಸಾಧಿಸಲು ಸಾಧ್ಯವಾಗಿದೆ. ನನ್ನ ಕ್ಷೇತ್ರದಿಂದ ಬಹಳಷ್ಟು ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ಈ ನಿಟ್ಟಿನಲ್ಲಿ ಆದಷ್ಟು ಹೆಚ್ಚಿನ ಅನುದಾನ ತಂದು ಕಾಮಗಾರಿ ಮಾಡಿಸುವ ಮೂಲಕ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಭರವಸೆ ನೀಡಿದರು.

ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಅವರು ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಚುನಾವಣೆಯಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿದೆ. ಯಾವದೇ ತಾರತಮ್ಯವಿಲ್ಲದೆ ಕೆಲಸ ಮಾಡುತ್ತೇನೆ. ಜಿ.ಪಂ.ನಲ್ಲಿ ಕುಡಿಯುವ ನೀರಿಗೆ ಅನುದಾನವಿಲ್ಲ. ಬಿರುನಾಣಿ ಮಾರುಕಟ್ಟೆ ಹಾಗೂ ಬಾಡಗರಕೇರಿ ಮಹಿಳಾ ಸಮಾಜಕ್ಕೆ ಅನುದಾನಕ್ಕೆ ಮನವಿ ಬಂದಿದ್ದು, ಸೂಕ್ತ ಅನುದಾನ ನೀಡುವ ಭರವಸೆ ನೀಡಿದರು.

ಬಿಜೆಪಿಯ ಹಿರಿಯ ಮುಖಂಡ ಬೊಟ್ಟಂಗಡ ಎಂ. ರಾಜು ಮಾತನಾಡಿ, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಐದು ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯವಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸಮರ್ಪಕವಾಗಿಲ್ಲದೆ ಈ ಭಾಗದ ಜನರು ಪರಿತಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಮಸ್ಯೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.

ಬಿರುನಾಣಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಣ್ಣಳಮಾಡ ರಾಯ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಜಪ್ಪು ಮುತ್ತಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಲ್ಯಮೀದೇರಿರ ಸಿ. ನಾಣಯ್ಯ, ಗ್ರಾ.ಪಂ. ಸದಸ್ಯರಾದ ಬೊಟ್ಟಂಗಡ ಗಿರೀಶ್, ಕಾಯಪಂಡ ಸುನಿಲ್, ಬಿ.ಸಿ. ಕೊರಗಪ್ಪ, ಶಾರದಾ, ಕಾಳಿಮಾಡ ಪುಷ್ಪ ಮತ್ತಿತರರು ಹಾಜರಿದ್ದರು.

ದೇವಟ್ ಪರಂಬು ಪ್ರಸ್ತಾಪ

ಸನ್ಮಾನ ಸಭೆಯಲ್ಲಿ ದೇವಟ್ ಪರಂಬು ಸ್ಮಾರಕ ಭಗ್ನಗೊಳಿಸಿದ ಕೃತ್ಯದ ಬಗ್ಗೆ ಜನಪ್ರತಿನಿಧಿಗಳು ಏಕೆ ಮೌನವಹಿಸಿದ್ದಾರೆ. ಈ ಪ್ರಕರಣವನ್ನು ಏಕೆ ಜನಪ್ರತಿನಿಧಿಗಳು ಖಂಡಿಸುತ್ತಿಲ್ಲವೆಂದು ಸಭೆಯಲ್ಲಿದ್ದ ಕರ್ತಮಾಡ ಮಿಲನ್, ಗುಡ್ಡಮಾಡ ಸುಬ್ರಮಣಿ, ಕಿಕಣಮಾಡ ಮನು ಸಭೆಯ ನಡುವೆ ಪ್ರಸ್ತಾಪಿಸಿದಾಗ ಇಡೀ ಸಭೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಅದಕ್ಕೆ ಧ್ವನಿ ಗೂಡಿಸಿದರು. ಸ್ಮಾರಕ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ, ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ವೇದಿಕೆಯಲ್ಲಿದ್ದ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅವರು ಸ್ಮಾರಕ ಭಗ್ನ ಪ್ರಕರಣವನ್ನು ಖಂಡಿಸುವದಲ್ಲದೇ ಸ್ಮಾರಕ ನಿರ್ಮಾಣಕ್ಕಾಗಿ ನಡೆಯುವ ಎಲ್ಲಾ ಹೋರಾಟಕ್ಕೆ ಬೆಂಬಲ ನೀಡುವದಾಗಿ ಹೇಳಿದರು. ಇಷ್ಟಕ್ಕೂ ತೃಪ್ತರಾಗದ ಕಾರ್ಯಕರ್ತರು ಪ್ರಕರಣ ಖಂಡಿಸದೆ ಮೌನವಹಿಸಿರುವ ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭ ಉತ್ತರಿಸುವದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೊಟ್ಟಂಗಡ ಎಂ. ರಾಜು ಅವರು ದೇವಟ್ ಪರಂಬುವಿನಲ್ಲಿ ಸ್ಮಾರಕ ನಿರ್ಮಾಣ ಯಾವದೇ ಜನಾಂಗದ ವಿರುದ್ಧವಲ್ಲ, ಹಾಗಿರುವಾಗ ಸ್ಮಾರಕವನ್ನು ಭಗ್ನಗೊಳಿಸಿರುವ ದುಷ್ಕರ್ಮಿಗಳ ಕೃತ್ಯವನ್ನು ಎಲ್ಲರೂ ಖಂಡಿಸಬೇಕು ಎಂದರು. ಗ್ರಾ.ಪಂ. ಸದಸ್ಯ ಬೊಟ್ಟಂಗಡ ಗಿರೀಶ್ ಮಾತನಾಡಿ, ಸ್ಮಾರಕ ಭಗ್ನಗೊಳಿಸಿರುವದು ಖಂಡನೀಯ ಎಂದರು. ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.