ಕುಶಾಲನಗರ, ಜೂ 14: ಕೂಡ್ಲಿಗಿ ಡಿವೈಎಸ್ಪಿ ಅನುಪಮ ಶೆಣೈ ಅವರ ರಾಜೀನಾಮೆ ಪ್ರಕರಣದ ಹಿಂದಿರುವ ಪ್ರಮುಖ ಕಾರಣದ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಹಾಗೂ ರಾಜೀನಾಮೆ ಹಿಂದಿರುವ ಕಾರಣಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಅನುಪಮ ಶೆಣೈ ಅವರು ಕೂಡಲೇ ಬಿಡುಗಡೆಗೊಳಿಸಬೇಕಿದೆ ಎಂದು ನಿವೃತ್ತ ಎಎಸ್‍ಐ ಎಸ್.ಬಿ. ಗಣಪತಿ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮತ್ತು ಪೊಲೀಸ್ ಇಲಾಖೆ ಅನುಪಮ ಶೆಣೈ ಅವರಂತಹ ದಿಟ್ಟ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದೆ. ಯಾವದೇ ಕಾರಣವಿಲ್ಲದೆ ಓರ್ವ ಡಿವೈಎಸ್ಪಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಅವರ ಕಚೇರಿ ಸಿಬ್ಬಂದಿಗಳನ್ನು ವಿಚಾರಿಸಿ ನೈಜ ಕಾರಣ ಪತ್ತೆಹಚ್ಚುವ ಕೆಲಸವಾಗಬೇಕು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕುಳ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುವ ಪರಿಸ್ಥಿತಿ ತಲೆದೋರಿದ ಕಾರಣದಿಂದಾಗಿ ಮನನೊಂದು ಅವರು ರಾಜೀನಾಮೆ ನೀಡಿದ್ದರೂ ಕೂಡ ತಕ್ಷಣ ಅದನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಾಯಿಸಿದರು. ರಾಜೀನಾಮೆಗೆ ಪ್ರಮುಖ ಕಾರಣ ಎನ್ನಲಾಗುವ ದೂರವಾಣಿ ಸಂಭಾಷಣೆ ತುಣುಕುಗಳು ಮತ್ತು ಸಿಡಿಯನ್ನು ಶೆಣೈ ಅವರು ಕೂಡಲೇ ಬಹಿರಂಗಪಡಿಸಬೇಕಾಗಿದೆ. ತಮ್ಮಲ್ಲಿರುವ ದಾಖಲಾತಿಗಳನ್ನು ಬಹಿರಂಗಪಡಿಸದೆ ಕೇವಲ ಆರೋಪ ಮಾಡುವದರಲ್ಲಿ ಯಾವದೇ ಹುರುಳಿಲ್ಲ ಎಂದ ಗಣಪತಿ, ಅನುಪಮ ಅವರ ಹೋರಾಟಕ್ಕೆ ನಿವೃತ್ತ ಅಧಿಕಾರಿಗಳು, ಸಿಬ್ಬಂದಿಗಳ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಒಂದು ವೇಳೆ ಸರಕಾರ ಅನುಪಮ ಅವರ ವಿರುದ್ಧವೇ ಕಾನೂನು ಕ್ರಮ ಕೈಗೊಂಡಲ್ಲಿ ಸಂಘ-ಸಂಸ್ಥೆಗಳ ಹಾಗೂ ಸರಕಾರಿ ಇಲಾಖೆಗಳ ನಿವೃತ್ತ ನೌಕರರ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದರು.

ಗೋಷ್ಠಿಯಲ್ಲಿ ನಿವೃತ್ತ ಪಿಎಸ್‍ಐಗಳಾದ ಎ.ಎ. ದೇವಯ್ಯ, ಬಿ.ವಿ. ಶಿವಪ್ಪ, ಕುಶಾಲನಗರ ಕೆಇಬಿ ನಿವೃತ್ತ ಇಂಜಿನಿಯರ್ ಬಿ.ವಿ. ವಾಸುದೇವ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಮಶೆಟ್ಟಿ ಇದ್ದರು.