ಕುಶಾಲನಗರ,ಜು. 17 : ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರದಲ್ಲಿ ‘ಓಪನ್ ಹೌಸ್’-2016 ಕಾರ್ಯಕ್ರಮವನ್ನು ತಾ. 19ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಕೇಂದ್ರದ ವಿಜ್ಞಾನ ಸಂಕೀರ್ಣದಲ್ಲಿ ಆಯೋಜಿಸಲಾಗಿದೆ ಎಂದು ಸ್ನಾತಕೋತ್ತರ ಕೇಂದ್ರದ ಪ್ರಬಾರ ನಿರ್ದೇಶಕ ಡಾ. ಕೆ.ಎಸ್ ಚಂದ್ರಶೇಖರಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪ್ರವೇಶಾತಿಯ ಕುರಿತು ಓಪನ್ ಹೌಸ್-ತೆರೆದ ಮನೆ ಕಾರ್ಯಕ್ರಮವನ್ನು ಕಳೆದ ಸಾಲಿನಿಂದ ಆಯೋಜಿಸುತ್ತಾ ಬಂದಿದೆ. ಈ ಬಾರಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಥಮ ಬಾರಿಗೆ ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರದಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ಸ್ನಾತಕೋತ್ತರ ಕೇಂದ್ರದಲ್ಲಿನ ವಿವಿಧ ಸ್ನಾತಕೋತ್ತರ ವಿಭಾಗಗಳನ್ನು ಪರಿಚಯಿಸುವದು ಮತ್ತು 2016-17ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಪ್ರವೇಶಾತಿ ಅರ್ಜಿಗಳನ್ನು ನೀಡುವದು, ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಮುಂದಿನ ಅವಕಾಶಗಳ ಬಗ್ಗೆ ಮುಕ್ತ ಸಮಾಲೋಚನೆ ಹಾಗೂ ಸಂಶೋಧನೆ ಮತ್ತು ಉದ್ಯೋಗಾ ವಕಾಶಗಳ ಬಗ್ಗೆ ಮಾಹಿತಿ, ಸ್ನಾತಕೋತ್ತರ ವಿಭಾಗಗಳಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಚಂದ್ರಶೇಖರಯ್ಯ ತಿಳಿಸಿದರು.

ಪ್ರವೇಶಾತಿ ಸಂಬಂಧಿಸಿದಂತೆ ಕೇವಲ ಸರ್ಕಾರಿ ಶುಲ್ಕ ಮಾತ್ರ ಇದ್ದು ಕಂತಿನ ರೂಪದಲ್ಲಿಯೂ ಕೂಡ ಶುಲ್ಕವನ್ನು ಪಾವತಿಸಬಹುದಾಗಿದೆ. ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡದೊಂದಿಗೆ ಉನ್ನತ ವ್ಯಾಸಂಗ ಮಾಡಿದ ಅಧ್ಯಾಪಕ ವರ್ಗವಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಸ್ಟೆಲ್, ಗ್ರಂಥಾಲಯ, ಇಂಟರ್‍ನೆಟ್ ಕೆಫೆ, ವೈಫೈ ಮುಂತಾದ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ ಎಂದರು.

ಕೇಂದ್ರದಲ್ಲಿ ಜೀವಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ವಾಣಿಜ್ಯ ಶಾಸ್ತ್ರ, ಸಮಾಜಕಾರ್ಯ, ಸ್ನಾತಕೋತ್ತರ ರಾಜ್ಯಶಾಸ್ತ್ರ, ಇತಿಹಾಸ, ಕನ್ನಡ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ ಕೋರ್ಸ್‍ಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ತಿತಿತಿ. mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ 08276-276474 ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಕೇಂದ್ರದ ಸಹಾಯಕ ಕುಲಸಚಿವ ಉಕ್ರಪ್ಪ ನಾಯಕ್ ಇದ್ದರು.