ಮಡಿಕೇರಿ, ಜು. 18 : ಜಿಲ್ಲೆಯಲ್ಲಿ ಈಗಾಗಲೇ 5 ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ದೇವಸ್ಥಾನ ಕಳ್ಳತನ ಮಾಡುವ ತಂಡ ಸಂಚರಿಸುತ್ತಿದೆ ಎಂಬ ಮಾಹಿತಿ ಇದೆ. ಆದ್ದರಿಂದ ಕಳ್ಳತನ ತಡೆಯುವ ನಿಟ್ಟಿನಲ್ಲಿ ದೇವಸ್ಥಾನಗಳ ಆಡಳಿತ ಮಂಡಳಿಯವರು ವಿವಿಧ ಕ್ರಮಗಳನ್ನು ಕೈಗೊಂಡು ಕಳ್ಳತನವನ್ನು ತಡೆಗಟ್ಟಲು ಮತ್ತು ಆರೋಪಿ ಮತ್ತು ಮಾಲುಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ರಾಜೇಂದ್ರ ಪ್ರಸಾದ್ ಅವರು ಕೋರಿದ್ದಾರೆ.

ದೇವಸ್ಥಾನಗಳ ಆಡಳಿತ ಮಂಡಳಿಯು ವಹಿಸಬೇಕಾದ ಕ್ರಮಗಳು ಇಂತಿವೆ:- ದೇವಸ್ಥಾನಕ್ಕೆ ಸಂಬಂಧ ಪಟ್ಟ ಚಿನ್ನಾಭರಣಗಳನ್ನು ದೇವಸ್ಥಾನದಲ್ಲಿ ಇಡದೇ ಲಾಕರ್‍ಗಳಲ್ಲಿ ಇಡುವಂತಹ ವ್ಯವಸ್ಥೆ ಮಾಡುವದು, ಸಾಧ್ಯವಾದಲ್ಲಿ ದೇವಸ್ಥಾನಗಳಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳ ನೇಮಕ ಮಾಡುವದು. ಹೈ-ಕ್ವಾಲಿಟಿಯ ಸಿ.ಸಿ.ಟಿ.ವಿಯನ್ನು ದೇವಸ್ಥಾನದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜಿತವಾಗಿ ಅಳವಡಿಸುವದು. ದೇವಸ್ಥಾನದ ಅಕ್ಕ-ಪಕ್ಕದ ನಿವಾಸಿಗಳಿಗೆ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುವದು. ದೇವಸ್ಥಾನದ ಕಳ್ಳತನದ ಬಗ್ಗೆ ಯಾವದೇ ವ್ಯಕ್ತಿಗಳ ಬಗ್ಗೆ ಅನುಮಾನ, ಸಂಶಯಗಳಿದ್ದಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಮತ್ತು ಜಿಲ್ಲಾ ಕಂಟ್ರೋಲ್ ರೂಂ 08272-228330, 08272-220720 ಅಥವಾ 100 ಗೆ ತಿಳಿಸುವದು. ಭಕ್ತಾದಿಗಳ ಸೋಗಿನಲ್ಲಿ ದೇವಸ್ಥಾನಗಳಿಗೆ ಬರುವಂತಹ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮನವಿ ಮಾಡಿದ್ದಾರೆ.