ಸೋಮವಾರಪೇಟೆ, ಜ. 26: ಫ್ರಾನ್ಸ್ ಮೂಲದ 12ನೇ ಶತಮಾನದಲ್ಲಿ ಕಟ್ಟಲ್ಪಡುತ್ತಿದ್ದ ಗೋತಿಕ್ ಶೈಲಿಯ ಜಯವೀರಮಾತೆ ದೇವಾಲಯ ಇಲ್ಲಿನ ಓಎಲ್‍ವಿ ಚರ್ಚ್ ಆವರಣದಲ್ಲಿ ನಿರ್ಮಾಣಗೊಂಡಿದ್ದು, ರೂ. 2.70ಕೋಟಿ ವೆಚ್ಚದ ಬೃಹತ್ ದೇವಾಲಯವನ್ನು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.ಮೈಸೂರು ಧರ್ಮ ಪ್ರಾಂತೀಯ ಗುರು ಫಾದರ್ ಡಾ.ಥೋಮಸ್ ವಾಳಪಿಳೈ ಅವರು ನೂತನ ದೇವಾಲಯವನ್ನು ಉದ್ಘಾಟಿಸಿ, ವಿಶೇಷ ಪೂಜಾರಾಧನೆಯೊಂದಿಗೆ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಧರ್ಮಕೇಂದ್ರಗಳ ಧರ್ಮಗುರುಗಳು ಈ ಸಂದರ್ಭ ಉಪಸ್ಥಿತರಿದ್ದರು.

ಇಲ್ಲಿನ ಸಂತ ಜೋಸೆಫರ ಶಾಲೆಯ ಆವರಣದಲ್ಲಿರುವ ಜಯವೀರಮಾತೆ ದೇವಾಲಯಕ್ಕೆ 50 ವರ್ಷಗಳು ತುಂಬಿದ್ದು, ಕಟ್ಟಡ ಶಿಥಿಲಾವಸ್ಥೆಗೆ ತಲಪುತ್ತಿದ್ದ ಹಿನ್ನೆಲೆ ಈ ನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಅತ್ಯಂತ ಆಕರ್ಷಣೀಯ ವಿನ್ಯಾಸದಲ್ಲಿ ಚರ್ಚ್ ರೂಪುಗೊಂಡಿದೆ. ಫ್ರಾನ್ಸ್ ಮೂಲದ ಗೋತಿಕ್ ಶೈಲಿಯಲ್ಲಿ (12ನೇ ಶತಮಾನದ ಶೈಲಿ) ಈ ದೇವಾಲಯ ನಿರ್ಮಾಣಗೊಂಡಿದ್ದು, ಕೊಡಗಿನ ಮಟ್ಟಿಗೆ ಬೃಹತ್ ದೇವಾಲಯ ಎಂಬ ಕೀರ್ತಿಗೆ ಭಾಜನವಾಗಲಿದೆ.

ಚರ್ಚ್‍ನ ಒಳ ಭಾಗದಲ್ಲಿ ಸುಮಾರು 1200 ಮಂದಿ ಕುಳಿತುಕೊಳ್ಳಬಹುದಾದ ವಿಶಾಲ ಸಭಾಂಗಣ, ಪಾಯಿಂಟೆಡ್ ಆರ್ಚ್, ಕಲರ್ ವಿಂಡೋಸ್, ಇಚ್ಚಿಂಗ್ ಗ್ಲಾಸ್, ಜಪ ಸರದ ರಹಸ್ಯ ತಿಳಿಸುವ 16 ಕಿಟಕಿ, ರೋಸ್ ವಿಂಡೋ, ಏಳೂವರೆ ಅಡಿ ಎತ್ತರದ ಶಿಲುಬೆ, 8 ಅಡಿ ಎತ್ತರದ ಏಸು ಹಾಗೂ ಮಾತೆ ಮರಿಯಮ್ಮ ಅವರ ಪ್ರತಿಮೆಯನ್ನು ಈ ದೇವಾಲಯ ಒಳಗೊಂಡಿದೆ.

100 ಅಡಿ ಉದ್ದ ಹಾಗೂ 60 ಅಡಿ ಅಗಲದ ಬೃಹತ್ ದೇವಾಲಯದ ಒಳಭಾಗದಲ್ಲಿ 45/15 ವಿಸ್ತೀರ್ಣದ ಗರ್ಭಗುಡಿ, ಪ್ರಾರ್ಥನೆಗೆ ಸಿದ್ಧವಾಗಲು ಧರ್ಮಗುರುಗಳ ಕೊಠಡಿ ಒಳಗೊಂಡಿದ್ದು, ಒಟ್ಟಾರೆ ದೇವಾಲಯದ ಎತ್ತರ 82 ಅಡಿ ಇದೆ. ಬಾಗಿಲು, ಕಿಟಕಿ, ಮೇಲ್ಛಾವಣಿ ಎಲ್ಲವೂ ಗೋತಿಕ್ ಶೈಲಿಯಲ್ಲಿಯೇ ನಿರ್ಮಾಣವಾಗಿದೆ. ಕೇರಳದ ಗುತ್ತಿಗೆದಾರ ಕ್ಷೇವಿಯರ್ ಅವರು ವಿಶಿಷ್ಟ ವಿನ್ಯಾಸದ ದೇವಾಲಯವನ್ನು ನಿರ್ಮಿಸಿದ್ದು, ಕೊಡಗು ಮಾತ್ರವಲ್ಲದೆ ರಾಜ್ಯದ ಅನೇಕ ಭಾಗದಿಂದ ದಾನಿಗಳು ಧನ ಸಹಾಯ ನೀಡಿದ ಪರಿಣಾಮ ಮೂರು ವರ್ಷಗಳ ನಂತರ ಸುಸಜ್ಜಿತ ದೇವಾಲಯ ಸಿದ್ಧಗೊಂಡಿದೆ.

ಇಲ್ಲಿನ ಚರ್ಚ್‍ನ ಧರ್ಮ ಗುರುಗಳಾದ ಫಾದರ್ ರಾಯಪ್ಪ, ಫಾದರ್ ವಿನ್ಸೆಂಟ್ ಮೊಂತೆರೋ ಅವರುಗಳ ಮುತುವರ್ಜಿ ಹಾಗೂ ದೇವಾಲಯ ನಿರ್ಮಾಣ ಸಮಿತಿ ಪದಾಧಿಕಾರಿಗಳ ಕಾರ್ಯತತ್ಪರತೆ ಯಿಂದ ರೂ. 2.70 ಕೋಟಿಯಷ್ಟು ಬೃಹತ್ ವೆಚ್ಚದ ದೇವಾಲಯ ಯಾವದೇ ಅಡೆ-ತಡೆಗಳಿಲ್ಲದೆ ನಿರ್ಮಾಣಗೊಂಡಿದ್ದು, ಪ್ರವಾಸೋದ್ಯಮ ತಾಣವಾಗಿಯೂ ಈ ಚರ್ಚ್‍ನ್ನು ರೂಪುಗೊಳಿಸುವ ಚಿಂತನೆ ಕ್ರೈಸ್ತ ಬಾಂಧವರಲ್ಲಿದೆ.

ಓಎಲ್‍ವಿ ಚರ್ಚ್ ವ್ಯಾಪ್ತಿಗೆ ಒಳಪಡುವ ಎಲ್ಲಾ ಕ್ರೈಸ್ತ ಕುಟುಂಬಗಳೂ ಸೇರಿದಂತೆ ಜಾತಿ-ಮತ-ಧರ್ಮ ಮೀರಿ ದಾನಿಗಳು ಧನ ಸಹಾಯ ನೀಡಿದ್ದರಿಂದಲೇ ದೇವಾಲಯ ನಿರ್ಮಾಣ ಕಾರ್ಯ ಸಾಧ್ಯವಾಯಿತು. ಇನ್ನೂ ರೂ. 50 ಲಕ್ಷ ವೆಚ್ಚದ ಕಾಮಗಾರಿಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕೆಲಸ ನಿರ್ವಹಿಸ ಲಾಗುವದು ಎಂದು ಫಾದರ್ ವಿನ್ಸೆಂಟ್ ಮೊಂತೆರೋ ತಿಳಿಸಿದರು.

- ವಿಜಯ್