ಮಡಿಕೇರಿ, ಜ. 26: ಕೃಷಿ ಇಲಾಖೆಯಿಂದ ಕೈಗೊಂಡಿರುವ ಪ್ರಮುಖ ಯೋಜನೆಗಳಾದ ಕೃಷಿ ಹೊಂಡ, ಕೃಷಿ ಯಂತ್ರಧಾರೆ, ಮಣ್ಣು ಪರೀಕ್ಷೆ ಹಾಗೂ ಕೃಷಿ ಯಾಂತ್ರೀಕರಣ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಬೀದಿ ನಾಟಕದ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಕಂಜರ ಬಾರಿಸುವ ಮೂಲಕ ಕೋಟೆ ಆವರಣದಲ್ಲಿ ಚಾಲನೆ ನೀಡಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಜಿ.ಪಂ. ಸಿಇಓ ಚಾರುಲತಾ ಸೋಮಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ರಾಮಪ್ಪ, ಪೌರಾಯುಕ್ತೆ ಬಿ. ಶುಭ ಸೇರದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ವಿವಿಧ ಕಾರ್ಯಕ್ರಮಗಳು ಇದ್ದು, ಇವುಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕಿದೆ. ಆ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಸಹಕಾರ ಹೀಗೆ ವಿವಿಧ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವದು ಅಗತ್ಯ ಎಂದರು.

ಕೃಷಿ ಇಲಾಖೆ ಮೂಲಕ ಸಾವಯವ ಭಾಗ್ಯ ಯೋಜನೆಯಡಿ ಎರೆಹುಳು ಗೊಬ್ಬರ, ಜೀವಾಮೃತ ತೊಟ್ಟಿ, ಅಜೋಲ ತೊಟ್ಟಿ, ಹಸಿರೆಲೆ ಬೀಜ ಪೂರೈಕೆ, ತರಕಾರಿ ಬೀಜ ಪೂರೈಕೆ ಹೀಗೆ ವಿವಿಧ ಕಾರ್ಯಕ್ರಮಗಳು ಇವೆ. ಯಂತ್ರೋಪಕರಣ ಯೋಜನೆಯಡಿ ಪಂಪ್ ಸೆಟ್, ಪವರ್ ವೀಡರ್, ಪವರ್ ಟಿಲ್ಲರ್, ಮಣ್ಣು ಪರೀಕ್ಷೆ ಕಾರ್ಯಕ್ರಮದಲ್ಲಿ ಮಣ್ಣು ಆರೋಗ್ಯ ಅಭಿಯಾನ, ಸಹಾಯಧನದಡಿ ಕೃಷಿ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಕೀಟ ನಾಶಕ ಔಷಧಿ ಹೀಗೆ ವಿವಿಧ ಸೌಲಭ್ಯಗಳಿದ್ದು, ಇವುಗಳನ್ನು ಬಳಸಿಕೊಳ್ಳು ವಂತಾಗಬೇಕು ಎಂದು ಸಲಹೆ ಮಾಡಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಬೀದಿನಾಟಕ ಮೂಲಕ ಹತ್ತು ದಿನಗಳ ಕಾಲ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ.

ಜಿಲ್ಲೆಯ ಮೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಬೀದಿನಾಟಕ ಮೂಲಕ ಕೃಷಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟ ಸುಧಾರಣೆ ಮಾಡುವದು, ಮಳೆ ಕೊಯ್ಲು ಅಳವಡಿಸುವದು, ಬದುಗಳ ನಿರ್ಮಾಣ, ಕೆರೆಕಟ್ಟೆಗಳ ನಿರ್ಮಾಣ ಮಾಡುವದು ಮತ್ತಿತರ ಬಗ್ಗೆ ಮಾಹಿತಿ ನೀಡುವದು ಅಗತ್ಯ ಎಂದರು.

ಕಲಾವಿದ ಈ. ರಾಜು ಮತ್ತು ತಂಡದವರು ಕೃಷಿ ಅಭಿಯಾನದ ಕುರಿತು ಜಾಗೃತಿ ಗೀತೆ ಹಾಡಿದರು. ಜಿ.ಪಂ. ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಮುಖ್ಯ ಯೋಜನಾಧಿಕಾರಿ ಸತ್ಯನ್, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಸಹಕಾರ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.