ಸುಂಟಿಕೊಪ್ಪ, ನ. 28: ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಜಮಾ ಬಂಧಿ ಸಭೆಯು ಶ್ರೀ ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾಬಂದಿ ಖರ್ಚು ವೆಚ್ಚದ ವಿವರವನ್ನು ಬಿಲ್‍ಕಲೆಕ್ಟರ್ ಪುನೀತ್ ಸಭೆಯ ಮುಂದಿಟ್ಟರು. ಗ್ರಾಮಸ್ಥರಾದ ವಸಂತ ಹಾಗೂ ಇಬ್ರಾಹಿಂ ಅವರು ಮಾತನಾಡಿ ಜಮಾಬಂದಿಯ ಪಟ್ಟಿಯಲ್ಲಿ ಅಧಿಕಾರಿಗಳು ದೃಢೀಕರಿಸಿದ ಸಹಿ ಇಲ್ಲ. ಇತರೆ ಖರ್ಚು 67,597 ರೂ. ಎಂದು ನಮೂದಿಸಲಾಗಿದೆ. ಇತರೆ ಖರ್ಚು ಯಾವದು ಮಾರುಕಟ್ಟೆಯಲ್ಲಿ ಸಂತೆ ದಿನ ಹೊರತು ಪಡಿಸಿ ಬೇರೆ ದಿನಗಳಲ್ಲೂ ತರಕಾರಿ ಇನ್ನಿತರ ವಸ್ತುಗಳ ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಬಾಡಿಗೆ ವಸೂಲು ಮಾಡಿದ ವಿವರ ಕಾಣುತ್ತಿಲ್ಲ. ಬೀದಿ ದೀಪ ಸಾಮಗ್ರಿ ಖರೀದಿ ಹಾಗೂ ಕಚೇರಿ ವಿದ್ಯುತ್ ಬಿಲ್‍ಗೆ 3,32,478 ರೂ. ಪಾವತಿಸಿದ್ದು ದುಬಾರಿಯಾಗಿದೆ. ಶೇಕಡ 25ರ ನಿಧಿಯಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಗ್ಯಾಸ್‍ಸಿಲಿಂಡರ್‍ಗಾಗಿ 3,23,176 ವೆಚ್ಚಮಾಡಲಾಗಿದೆ. ಅದರ ಫಲಾನುಭವಿಗಳ ವಿವರ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾ.ಪಂ. ಪಿಡಿಓ ಸುಮೇಶ್ ಉತ್ತರಿಸಿ ಜಮಾಬಂದಿ ಕಾರ್ಯಕ್ರಮ ದಲ್ಲಿ ಗ್ರಾಮಸ್ಥರ ಆಕ್ಷೇಪಗಳನ್ನು ದಾಖಲು ಮಾಡಲಾಗುವದು. ನೋಡಲ್ ಅಧಿಕಾರಿಗಳ ಅನು ಮೋದನೆ ಪಡೆದು ಜಮಾ ಖರ್ಚಿನ ಲೆಕ್ಕತಃಖ್ತೆಯನ್ನು ತಾ.ಪಂ. ಇಓಗೆ ಒಪ್ಪಿಸಲಾಗುವದು. ಆನಂತರ ಗ್ರಾ.ಪಂ.ನ ಜಮಾಬಂದಿಯ ಪೂರ್ಣ ವರದಿಯ ದಾಖಲಾತಿ ಪಂಚಾಯಿತಿ ಪಡೆದುಕೊಳ್ಳದೆ ಇದು ಪಾರದರ್ಶಕವಾಗಿರುತ್ತದೆ ಎಂದು ಹೇಳಿದರು. ಮಾರುಕಟ್ಟೆಯಲ್ಲಿ ಸಂತೆ ದಿನ ಹೊರತುಪಡಿಸಿ ಬೇರೆ ದಿನಗಳಲ್ಲಿ ವ್ಯಾಪಾರ ಮಾಡುತ್ತಿದ್ದವರಿಂದ ವಾರ್ಷಿಕವಾಗಿ 19,570 ರೂ. ಬಾಡಿಗೆ ಹಣ ಪಡೆಯಲಾಗಿದೆ ಎಂದು ಪಿಡಿಓ ಸಭೆಗೆ ಮಾಹಿತಿ ನೀಡಿದರು.

ಜಮಾಬಂದಿ ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪಿಡಿಓ ಎಂ.ಆರ್. ಸುಮೇಶ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಾ ಲಾವತಿ, ಗ್ರಾ.ಪಂ. ಸದಸ್ಯರು ಗಳಾದ ಕೆ.ಇ. ಕರೀಂ, ಶಾಹಿದ್, ಸಿ. ಚಂದ್ರ, ನಾಗರತ್ನ, ಗಂಗಮ್ಮ, ಶಿವಮ್ಮ, ನೋಡಲ್ ಅಧಿಕಾರಿಯಾದ ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ. ಆನಂದ್, ಜಿ.ಪಂ. ಇಂಜಿನಿಯರ್ ಫಯಾಜ್ ಅಹ್ಮದ್ ಉಪಸ್ಥಿತರಿದ್ದರು. ಪಂಚಾಯಿತಿ ಬಿಲ್ ಕಲೆಕ್ಟರ್ ಪುನೀತ್ ಸ್ವಾಗತಿಸಿ, ವಂದಿಸಿದರು.