ಸೋಮವಾರಪೇಟೆ, ಜೂ. 15: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಇಚ್ಛಾಶಕ್ತಿಯಿಂದಾಗಿ ಗ್ರಾಮದ ರಸ್ತೆಗಳು ಹಾಗೂ ಚರಂಡಿಗಳು ಶುಚಿಗೊಂಡು ನೆಮ್ಮದಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚರಂಡಿಗಳು ತ್ಯಾಜ್ಯಗಳಿಂದ ಮುಚ್ಚಿದ ಹಿನ್ನೆಲೆಯಲ್ಲಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿದು ಪಾದಚಾರಿಗಳು ಸಂಚರಿಸಲು ಅಸಾಧ್ಯವಾಗಿತ್ತು. ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದುದನ್ನು ಮನಗಂಡ ಈ ವಾರ್ಡ್‍ಗಳನ್ನು ಪ್ರತಿನಿಧಿಸುವ ಸದಸ್ಯರು ಪಂಚಾಯಿತಿಯ ಅನುದಾನವನ್ನು ಶುಚಿತ್ವಕ್ಕೆ ಬಳಸಿಕೊಳ್ಳುವ ಮೂಲಕ ಸ್ವಚ್ಛ ಭಾರತ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಚೌಡ್ಲು ಗ್ರಾಮ ಪಂಚಾಯಿತಿಯ 2ನೇ ವಾರ್ಡ್ ವ್ಯಾಪ್ತಿಗೆ ಗಾಂಧಿನಗರ, ಕಲ್ಲಾರೆ ಹಾಗೂ ಆಲೆಕಟ್ಟೆ ರಸ್ತೆ ಒಳಪಡುತ್ತದೆ. ಅತೀ ಹೆಚ್ಚಿನ ಕೂಲಿ ಕಾರ್ಮಿಕರೂ ಸೇರಿದಂತೆ ಬಡಕುಟುಂಬಗಳೇ ಅಧಿಕವಿರುವ ಗ್ರಾಮದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮನೆಯಿಂದ ಹೊರ ಬರುವ ತ್ಯಾಜ್ಯ ನೇರವಾಗಿ ಚರಂಡಿಗೆ ಹರಿಯಲು ಬಹುತೇಕ ಕಡೆಗಳಲ್ಲಿ ವ್ಯವಸ್ಥೆಗಳಿಲ್ಲ. ಇನ್ನು ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗಳು ಮಣ್ಣು, ತ್ಯಾಜ್ಯಗಳಿಂದ ಮುಚ್ಚಿ ಹೋಗಿದ್ದ ಪರಿಣಾಮ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆ ಮೇಲೆಯೇ ಹರಿಯುತ್ತಿತ್ತು. ಇದನ್ನು ಮನಗಂಡ ಸದಸ್ಯರು ವಾರ್ಡನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ಸಂಕಲ್ಪತೊಟ್ಟು ಕೆಲಸ ನಿರ್ವಹಿಸಿದ ಹಿನ್ನೆಲೆ ಇದೀಗ ಸ್ವಚ್ಛ ಪರಿಸರ ಎಲ್ಲೆಡೆ ಕಂಡುಬರುತ್ತಿದೆ. ವಾರ್ಡ್-2ನ್ನು ಪ್ರತಿನಿಧಿಸುತ್ತಿರುವ ಗ್ರಾಪಂ ಸದಸ್ಯರುಗಳಾದ ಜಯಲಕ್ಷ್ಮಿ (ಮಂಜುಳ), ದಿವ್ಯ ಹಾಗೂ ಧರ್ಮ ಅವರುಗಳು ಪಂಚಾಯಿತಿ ಅನುದಾನದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿದರಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಸೇರಿದಂತೆ ಇದ್ದ ತ್ಯಾಜ್ಯಗಳ ರಾಶಿಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೂ ಅವಕಾಶ ಮಾಡಿದ್ದಾರೆ. ಸದಸ್ಯರುಗಳ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.